ಕೋಲಾರ: ಜಿಲ್ಲೆಯ ಮಾಲೂರು ತಾಲೂಕಿನಲ್ಲಿ ನಡೆಯುತ್ತಿದ್ದ ಅಮಾನವೀಯ ಜೀತ ಕಾರ್ಮಿಕ ಪದ್ಧತಿಯ ಜಾಲವನ್ನು ಭೇದಿಸಿರುವ ಅಧಿಕಾರಿಗಳು, ಭರ್ಜರಿ ಕಾರ್ಯಾಚರಣೆಯ ಮೂಲಕ ಒಟ್ಟು 10 ಮಂದಿಯನ್ನು ರಕ್ಷಿಸಿದ್ದಾರೆ. ಇಟ್ಟಿಗೆ ಫ್ಯಾಕ್ಟರಿಯೊಂದರಲ್ಲಿ ಕಾನೂನುಬಾಹಿರವಾಗಿ ಜೀತಕ್ಕಿದ್ದ ಇಬ್ಬರು ಬಾಲಕರು ಹಾಗೂ ಎಂಟು ಮಂದಿ ಕಾರ್ಮಿಕರು ಈಗ ಬಂಧಮುಕ್ತರಾಗಿದ್ದಾರೆ.
ಕಾರ್ಯಾಚರಣೆ ನಡೆದದ್ದು ಎಲ್ಲಿ?
ಮಾಲೂರು ತಾಲೂಕಿನ ಶಿವಾರಪಟ್ಟಣದ ಬಳಿ ಇರುವ ‘ಎನ್.ಕೆ.ಎನ್’ (NKN) ಎಂಬ ಹೆಸರಿನ ಇಟ್ಟಿಗೆ ಕಾರ್ಖಾನೆಯಲ್ಲಿ ಕಾರ್ಮಿಕರನ್ನು ಜೀತಕ್ಕೆ ಇರಿಸಿಕೊಳ್ಳಲಾಗಿದೆ ಎಂಬ ಖಚಿತ ಮಾಹಿತಿ ಲಭಿಸಿತ್ತು. ಮಂಗಳವಾರ ಸಂಜೆ ಕೋಲಾರ ಉಪ ವಿಭಾಗಾಧಿಕಾರಿ (AC) ಜಂಬಗಿ ರೇಣುಕಾ ಪ್ರಸಾದ್ ದಿಲೀಪ್ ಅವರ ನೇತೃತ್ವದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳ ತಂಡ ಜಂಟಿಯಾಗಿ ಈ ದಾಳಿ ನಡೆಸಿದೆ.
ರಕ್ಷಿಸಲ್ಪಟ್ಟವರು ಯಾರು?
ದಾಳಿಯ ವೇಳೆ ಒಡಿಶಾ ಮೂಲದ ಎಂಟು ಮಂದಿ ಕಾರ್ಮಿಕರು ಹಾಗೂ ಇಬ್ಬರು ಬಾಲ ಕಾರ್ಮಿಕರನ್ನು ರಕ್ಷಿಸಲಾಗಿದೆ. ಬಡತನದ ಲಾಭ ಪಡೆದು ಇವರನ್ನು ಅಮಾನವೀಯವಾಗಿ ಕೆಲಸಕ್ಕೆ ಬಳಸಿಕೊಳ್ಳಲಾಗುತ್ತಿತ್ತು ಎನ್ನಲಾಗಿದೆ. ರಕ್ಷಿಸಲ್ಪಟ್ಟ ಕಾರ್ಮಿಕರಿಗೆ ಇಲಾಖೆಯ ವತಿಯಿಂದ ತಕ್ಷಣವೇ ‘ಬಿಡುಗಡೆ ಪತ್ರ’ (Relieve Certificate) ನೀಡಲು ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ.
ಯಾರ ವಿರುದ್ಧ ಪ್ರಕರಣ ದಾಖಲು?
ಈ ಕಾರ್ಖಾನೆಯ ಮಾಲೀಕ ಮೊಹ್ಮದ್ ಇಬ್ರಾಹಿಂ ಖಾನ್ ಎಂಬಾತನ ವಿರುದ್ಧ ಜೀತ ಕಾರ್ಮಿಕ ಪದ್ಧತಿ ನಿಷೇಧ ಕಾಯ್ದೆಯಡಿ ಮಾಲೂರು ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಅಧಿಕಾರಿಗಳು ಕಾರ್ಖಾನೆಯ ಅಕ್ರಮಗಳ ಬಗ್ಗೆ ಸಮಗ್ರ ತನಿಖೆ ಆರಂಭಿಸಿದ್ದಾರೆ.
ದಾಳಿಯಲ್ಲಿ ಭಾಗವಹಿಸಿದ ಅಧಿಕಾರಿಗಳು
ಈ ಬೃಹತ್ ಕಾರ್ಯಾಚರಣೆಯಲ್ಲಿ ಮಾಲೂರು ತಾಲ್ಲೂಕು ಪಂಚಾಯತ್ ಇಓ ಕೃಷ್ಣಪ್ಪ, ಸಿಡಿಪಿಓ ಶೋಭ, ಕಾರ್ಮಿಕ ಇಲಾಖೆ ಅಧಿಕಾರಿ ರೇಣುಕಾ ಪ್ರಸನ್ನ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಶಿವಕುಮಾರ್ ಸೇರಿದಂತೆ ಪೊಲೀಸ್ ಸಿಬ್ಬಂದಿ ಭಾಗವಹಿಸಿದ್ದರು.
ಘರ್ ವಾಪಸಿಗೆ ಸಿದ್ಧತೆ: ಜೀತದಿಂದ ಮುಕ್ತರಾಗಿರುವ ಈ ಎಲ್ಲಾ ಕಾರ್ಮಿಕರನ್ನು ಸದ್ಯ ಅಧಿಕಾರಿಗಳ ಸುಪರ್ದಿಯಲ್ಲಿ ಸುರಕ್ಷಿತವಾಗಿರಿಸಲಾಗಿದೆ. ಅವರಿಗೆ ಅಗತ್ಯವಿರುವ ಮೂಲಭೂತ ಸೌಕರ್ಯ ಒದಗಿಸಿ, ಅವರ ಸ್ವಂತ ಊರುಗಳಿಗೆ ಕಳುಹಿಸಿಕೊಡಲು ಜಿಲ್ಲಾಡಳಿತ ವ್ಯವಸ್ಥೆ ಮಾಡುತ್ತಿದೆ ಎಂದು ಎಸಿ ರೇಣುಕಾ ಪ್ರಸಾದ್ ತಿಳಿಸಿದ್ದಾರೆ.
