"ಮಲ್ಲಿಕಾರ್ಜುನ್ ಮಹಾ ಮೋಸಗಾರ, ಅವನ ಕಟ್ಟುಕಥೆ ನಂಬಬೇಡಿ!": ಮಾಜಿ ಮ್ಯಾನೇಜರ್ ವಿರುದ್ಧ ದಿನಕರ್ ತೂಗುದೀಪ ಗುಡುಗು



ಬೆಂಗಳೂರು: ಸ್ಯಾಂಡಲ್‌ವುಡ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಮಾಜಿ ಮ್ಯಾನೇಜರ್ ಮಲ್ಲಿಕಾರ್ಜುನ್ ದಶಕದ ನಂತರ ದಿಢೀರ್ ಪ್ರತ್ಯಕ್ಷವಾಗಿ ಸುದ್ದಿಗೋಷ್ಠಿ ನಡೆಸಿದ ಬೆನ್ನಲ್ಲೇ, ಅವರ ವಿರುದ್ಧ ದರ್ಶನ್ ಸಹೋದರ ಹಾಗೂ ನಿರ್ದೇಶಕ ದಿನಕರ್ ತೂಗುದೀಪ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಮಲ್ಲಿಕಾರ್ಜುನ್ ಒಬ್ಬ ವಂಚಕ ಎಂದು ಕರೆದಿರುವ ದಿನಕರ್, ಸಾಮಾಜಿಕ ಜಾಲತಾಣದಲ್ಲಿ ಸುದೀರ್ಘ ಪೋಸ್ಟ್ ಹಂಚಿಕೊಳ್ಳುವ ಮೂಲಕ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ.

ನಂಬಿಕೆ ದ್ರೋಹದ ಆರೋಪ

ದಿನಕರ್ ತೂಗುದೀಪ ತಮ್ಮ ಪೋಸ್ಟ್‌ನಲ್ಲಿ ಮಲ್ಲಿಕಾರ್ಜುನ್‌ನನ್ನು "ಚೀಟರ್ ಮಲ್ಲು" ಎಂದು ಸಂಬೋಧಿಸಿದ್ದಾರೆ. "ಎಂಟು ವರ್ಷಗಳ ಹಿಂದೆ ಹಣಕಾಸಿನ ವಿಚಾರದಲ್ಲಿ ನಮಗಷ್ಟೇ ಅಲ್ಲದೆ, ನಮ್ಮ ಹೆಸರು ಮತ್ತು ತೂಗುದೀಪ ಸಂಸ್ಥೆಯ ಹೆಸರನ್ನು ದುರ್ಬಳಕೆ ಮಾಡಿಕೊಂಡು ಅನೇಕ ಸ್ನೇಹಿತರಿಗೆ ಹಾಗೂ ಪರಿಚಯದವರಿಗೆ ಈತ ಕೋಟ್ಯಂತರ ರೂಪಾಯಿ ವಂಚಿಸಿದ್ದಾನೆ. ಸುಳ್ಳು ಹೇಳಿ ಹಣ ಪಡೆದು ಪರಾರಿಯಾಗಿದ್ದ ಈತ ಈಗ ದಿಢೀರನೆ ಪ್ರತ್ಯಕ್ಷನಾಗಿದ್ದಾನೆ," ಎಂದು ಕಿಡಿಕಾರಿದ್ದಾರೆ.

ಸಿಂಪತಿ ಗಿಟ್ಟಿಸುವ ಹುನ್ನಾರ?

ಏಪ್ರಿಲ್ 16ರಂದು ಮಲ್ಲಿಕಾರ್ಜುನ್ ನಡೆಸಿದ್ದ ಪತ್ರಿಕಾಗೋಷ್ಠಿಯ ಬಗ್ಗೆ ಪ್ರತಿಕ್ರಿಯಿಸಿದ ದಿನಕರ್, "ಆ ಸುದ್ದಿಗೋಷ್ಠಿಯಲ್ಲಿ ತನಗೆ ಏನೋ ಸಂಕಷ್ಟವಾಯಿತು ಎಂದು ಹೇಳಿಕೊಂಡು ಜನರ ನಂಬಿಕೆ ಗಳಿಸಲು ಕಟ್ಟುಕಥೆ ಹೇಳುತ್ತಿದ್ದಾನೆ. ಆದರೆ ತನ್ನಿಂದ ಯಾರಿಗೆಲ್ಲ ಅನಾಹುತವಾಯಿತು, ಎಷ್ಟು ಜನರಿಗೆ ಮೋಸವಾಯಿತು ಎಂಬುದನ್ನು ಆತ ಹೇಳುತ್ತಿಲ್ಲ. ಮೋಸ ಮಾಡುವ ಮುನ್ನ ಈತ ಬಳಸುವ ಮೊದಲ ಅಸ್ತ್ರವೇ 'ಸಿಂಪತಿ'. ಈತನ ಕಟ್ಟುಕಥೆಗಳನ್ನು ಯಾರೂ ನಂಬಬೇಡಿ," ಎಂದು ಮನವಿ ಮಾಡಿದ್ದಾರೆ.

ತೂಗುದೀಪ ಕುಟುಂಬಕ್ಕೂ ಈತನಿಗೂ ಸಂಬಂಧವಿಲ್ಲ

ಮಲ್ಲಿಕಾರ್ಜುನ್ ಸುದ್ದಿಗೋಷ್ಠಿಯಲ್ಲಿ ಪದೇ ಪದೇ ದರ್ಶನ್ ಹಾಗೂ ದಿನಕರ್ ಹೆಸರನ್ನು ಪ್ರಸ್ತಾಪಿಸಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ದಿನಕರ್, "ನಮ್ಮ ನಂಬಿಕೆಗೆ ದ್ರೋಹ ಮಾಡಿರುವ ಈತ ಮಹಾ ಮೋಸಗಾರ. ನಾನಾಗಲಿ, ದರ್ಶನ್ ಆಗಲಿ ಅಥವಾ ನಮ್ಮ ತೂಗುದೀಪ ಸಂಸ್ಥೆಯಾಗಲಿ ಈತನನ್ನು ಎಂದಿಗೂ ಹತ್ತಿರ ಸೇರಿಸುವುದಿಲ್ಲ. ಈ ನಂಬಿಕೆ ದ್ರೋಹಿಗೂ ನಮಗೂ ಯಾವುದೇ ಸಂಬಂಧವಿಲ್ಲ," ಎಂದು ಸ್ಪಷ್ಟಪಡಿಸಿದ್ದಾರೆ.

ಸಾರ್ವಜನಿಕರಿಗೆ ಎಚ್ಚರಿಕೆ

ದರ್ಶನ್ ಅವರ ಹೆಸರನ್ನು ಬಳಸಿಕೊಂಡು ಮಲ್ಲಿಕಾರ್ಜುನ್ ಮತ್ತೆ ದುಡ್ಡು ಮಾಡಲು ಸಂಚು ರೂಪಿಸುತ್ತಿದ್ದಾನೆ ಎಂದು ದಿನಕರ್ ಆರೋಪಿಸಿದ್ದಾರೆ. "ದರ್ಶನ್ ಅವರ ಒಡನಾಟದ ಬಗ್ಗೆ ಹೇಳಿಕೊಂಡು ಯಾರ ಬಳಿಯಾದರೂ ಲಾಭ ಮಾಡಲು ಬಂದರೆ ದಯವಿಟ್ಟು ಯಾಮಾರಬೇಡಿ. ಅವನ ಮಾತನ್ನು ನಂಬಿ ಯಾರು ಮೋಸ ಹೋಗಬೇಡಿ," ಎಂದು ಅವರು ಪೋಸ್ಟ್ ಮುಕ್ತಾಯಗೊಳಿಸಿದ್ದಾರೆ.

ಹಲವು ವರ್ಷಗಳ ಕಾಲ ನಾಪತ್ತೆಯಾಗಿದ್ದ ಮಲ್ಲಿಕಾರ್ಜುನ್ ಮರಳಿ ಬಂದಿರುವುದು ಸ್ಯಾಂಡಲ್‌ವುಡ್‌ನಲ್ಲಿ ಭಾರಿ ಕುತೂಹಲ ಮೂಡಿಸಿತ್ತು. ಆದರೆ ಈಗ ದಿನಕರ್ ತೂಗುದೀಪ ಅವರ ಈ ನೇರ ವಾಗ್ದಾಳಿ ಪ್ರಕರಣಕ್ಕೆ ಹೊಸ ತಿರುವು ನೀಡಿದೆ. ದಿನಕರ್ ಅವರ ಈ ಪೋಸ್ಟ್‌ಗೆ ಮಲ್ಲಿಕಾರ್ಜುನ್ ಯಾವ ರೀತಿ ಪ್ರತಿಕ್ರಿಯೆ ನೀಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.