ಬೆಂಗಳೂರು: ಸಿಲಿಕಾನ್ ಸಿಟಿಯ ವಿವಿಧೆಡೆ ಸ್ಪಾ ಮತ್ತು ಬಾಡಿಗೆ ಮನೆಗಳನ್ನು ಕೇಂದ್ರವಾಗಿಸಿಕೊಂಡು ನಡೆಸಲಾಗುತ್ತಿದ್ದ ಬೃಹತ್ ವೇಶ್ಯಾವಾಟಿಕೆ ದಂಧೆಯನ್ನು ಸಿಸಿಬಿ (CCB) ಪೊಲೀಸರು ಭೇದಿಸಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಮೂವರು ಮಹಿಳೆಯರು ಸೇರಿದಂತೆ ಒಟ್ಟು ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದ್ದು, ದಂಧೆಯ ಕಪಿಮುಷ್ಟಿಯಲ್ಲಿದ್ದ ಆರು ಮಂದಿ ಮಹಿಳೆಯರನ್ನು ರಕ್ಷಿಸಲಾಗಿದೆ.
ಮೂರು ಕಡೆಗಳಲ್ಲಿ ಸರಣಿ ದಾಳಿ
ನಗರದ ಮರಠಹಳ್ಳಿ, ಸುಂಕದಕಟ್ಟೆ ಭಾಗದ ಸ್ಪಾಗಳು ಹಾಗೂ ಮಂಜುನಾಥನಗರದ ಮನೆಯೊಂದರಲ್ಲಿ ಅನೈತಿಕ ಚಟುವಟಿಕೆಗಳು ನಡೆಯುತ್ತಿರುವ ಬಗ್ಗೆ ಸಿಸಿಬಿ ಮಹಿಳಾ ರಕ್ಷಣಾ ಘಟಕಕ್ಕೆ ಖಚಿತ ಮಾಹಿತಿ ಲಭಿಸಿತ್ತು. ಈ ಮಾಹಿತಿಯ ಆಧಾರದ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿದ ಪೊಲೀಸರು, ದಂಧೆಯ ಜಾಲವನ್ನು ಕಿತ್ತೆಸೆದಿದ್ದಾರೆ.
ಬಂಧಿತ ಆರೋಪಿಗಳು ಅಮಾಯಕ ಮಹಿಳೆಯರಿಗೆ ಕೆಲಸದ ಆಮಿಷವೊಡ್ಡಿ ಅಥವಾ ಬಲವಂತವಾಗಿ ಈ ಕರಾಳ ದಂಧೆಗೆ ತಳ್ಳುತ್ತಿದ್ದರು ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಫೋನ್ ಮೂಲಕ ಗ್ರಾಹಕರನ್ನು ಸಂಪರ್ಕಿಸಿ ರಹಸ್ಯವಾಗಿ ಈ ವ್ಯವಹಾರ ನಡೆಸುತ್ತಿದ್ದರು. ಸದ್ಯ ರಕ್ಷಿಸಲ್ಪಟ್ಟ ಆರು ಮಹಿಳೆಯರನ್ನು ಪುನರ್ವಸತಿ ಕೇಂದ್ರಕ್ಕೆ ಕಳುಹಿಸಿಕೊಡಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಎಚ್‌ಎಎಲ್ (HAL), ಬ್ಯಾಡರಹಳ್ಳಿ ಮತ್ತು ಬಾಗಲಗುಂಟೆ ಪೊಲೀಸ್ ಠಾಣೆಗಳಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.
ವಾಕಿಂಗ್ ಮಾಡುತ್ತಿದ್ದ ವ್ಯಕ್ತಿಯ ಸರ ಸುಲಿಗೆ: ಇಬ್ಬರು ಖತರ್ನಾಕ್ ಕಳ್ಳರ ಬಂಧನ
ಇನ್ನೊಂದು ಪ್ರಕರಣದಲ್ಲಿ, ಮುಂಜಾನೆ ವಾಕಿಂಗ್ ಮಾಡುತ್ತಿದ್ದ ವ್ಯಕ್ತಿಯನ್ನು ಅಡ್ಡಗಟ್ಟಿ ಚಿನ್ನದ ಸರ ಸುಲಿಗೆ ಮಾಡಿದ್ದ ಇಬ್ಬರು ಆರೋಪಿಗಳನ್ನು ಬೆಂಗಳೂರಿನ ಹೆಣ್ಣೂರು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತರು ಯಾರು? ಡಿಜೆ ಹಳ್ಳಿ ನಿವಾಸಿಗಳಾದ ಸ್ಯಾಮ್ಸನ್ ಸಾಲ್ಮನ್ (19) ಹಾಗೂ ಜಯಶೀಲನ್ ಡೇವಿಡ್ ಬಂಧಿತ ಆರೋಪಿಗಳು. ಇವರು ಹೆಣ್ಣೂರು ಪೊಲೀಸ್ ಠಾಣೆ ವ್ಯಾಪ್ತಿಯ ಟೀಚರ್ಸ್ ಲೇಔಟ್‌ನಲ್ಲಿ ಶಾಸ್ತ್ರಿ ಎಂಬುವವರು ವಾಕಿಂಗ್ ಮಾಡುತ್ತಿದ್ದಾಗ ಅವರ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಕಿತ್ತು ಪರಾರಿಯಾಗಿದ್ದರು.
ಸಿಸಿಟಿವಿ ನೀಡಿದ ಸುಳಿವು: ಘಟನೆಯ ನಂತರ ಸಿಸಿಟಿವಿ ದೃಶ್ಯಾವಳಿಗಳನ್ನು ತೀವ್ರವಾಗಿ ಪರಿಶೀಲಿಸಿದ ಪೊಲೀಸರು ಆರೋಪಿಗಳನ್ನು ಪತ್ತೆಹಚ್ಚಿದ್ದಾರೆ. ಬಂಧಿತರಿಂದ 38 ಗ್ರಾಂ ತೂಕದ ಚಿನ್ನದ ಸರ ಹಾಗೂ ಕೃತ್ಯಕ್ಕೆ ಬಳಸಿದ್ದ ಬೈಕ್ ಅನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳು ಈ ಹಿಂದೆಯೂ ಹಲವು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರುವುದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.
